ಹೆಚ್ ಡಿ ದೇವೇಗೌಡ
ಕರ್ನಾಟಕ
ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಹೆಚ್ ಡಿ ದೇವೇಗೌಡ
ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಪ್ರಮುಖ ಪಾತ್ರ. ಈ ಬಾರಿ ...
ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಪ್ರಮುಖ ಪಾತ್ರ. ಈ ಬಾರಿ ದೇಶ ಮಟ್ಟದಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ನಿಂತು ಮಹಾಘಟಬಂಧನ ಎಂದು ಸಂಘಟಿಸಿಕೊಂಡು ಹೋರಾಡುವಲ್ಲಿ ದೇವೇಗೌಡರು ಮುಂಚೂಣಿ ಪಾತ್ರದಲ್ಲಿ ನಿಲ್ಲಿಸಲಾಗಿದೆ. 85ರ ಇಳಿವಯಸ್ಸಿನಲ್ಲಿ ಹಾಸನ ಬಿಟ್ಟು ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಬಿಆರ್ ಉದಯ್ ಕುಮಾರ್ ಜೊತೆಗೆ ಕರ್ನಾಟಕ, ನರೇಂದ್ರ ಮೋದಿ, ದೇವರು, ಬಿಜೆಪಿ, ರಾಜಕೀಯ ಇತ್ಯಾದಿಗಳ ಕುರಿತು ಮಾತನಾಡಿದ್ದಾರೆ. ಆದರ ಆಯ್ದ ಭಾಗ ಇಲ್ಲಿದೆ:
ಹಿಂದೊಮ್ಮೆ ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಿರಿ. ಆದರೆ ಮತ್ತೊಮ್ಮೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿದ್ದೀರಿ. ಅಂದರೆ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗುವ ಆಶಯ ನಿಮಗೆ ಮೂಡಿದೆಯೇ?
ಪ್ರಧಾನ ಮಂತ್ರಿ ಅಭ್ಯರ್ಥಿ ರಾಹುಲ್ ಗಾಂಧಿಯವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಆರಂಭದಲ್ಲಿಯೇ ಕಾಂಗ್ರೆಸ್ ಗೆ ಹೇಳಿದ್ದೆ. ರಾಷ್ಟ್ರ ರಾಜಕಾರಣದಲ್ಲಿ ಮಹಾ ಘಟಬಂಧನದಲ್ಲಿ ನಾನು ಹಿರಿಯ ನಾಯಕನ ಪಾತ್ರ ವಹಿಸಲು ಇಚ್ಛಿಸುತ್ತೇನೆಯೇ ಹೊರತು ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷೆ ನನಗಿಲ್ಲ. 60 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಮೂರು ಬಾರಿ ನೀರಾವರಿ ಸಚಿವನಾಗಿ, 17 ತಿಂಗಳು ಮುಖ್ಯಮಂತ್ರಿಯಾಗಿ, 10 ತಿಂಗಳು ಪ್ರಧಾನ ಮಂತ್ರಿಯಾಗಿದ್ದೆ. ಚುನಾವಣೆಯಲ್ಲಿ ಸ್ಥಾನಮಾನದ ಆಸೆಯಿಟ್ಟುಕೊಂಡು ನಾನು ಸ್ಪರ್ಧಿಸುವುದಿಲ್ಲ. ರಾಜಕೀಯ ಬಿಕ್ಕಟ್ಟನ್ನು ಎದುರಿಸುವ ಶಕ್ತಿಯನ್ನು ನನಗೆ ದೇವರು ಕೊಟ್ಟಿದ್ದಾರೆ. ನನ್ನ ಮೇಲೆ ಈ ಹಿಂದೆ ಹಲವು ನಾಯಕರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವುಗಳೆಲ್ಲವನ್ನೂ ಎದುರಿಸಿಕೊಂಡು ಬಂದಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ.
ಈ 85ರ ಇಳಿವಯಸ್ಸಿನಲ್ಲಿ ಹಾಸನ ಬಿಟ್ಟು ತುಮಕೂರು ಲೋಕಸಭೆ ಕ್ಷೇತ್ರವನ್ನು ಏಕೆ ಆಯ್ಕೆ ಮಾಡಿಕೊಂಡಿರಿ?
ರಾಜಕೀಯ ನಾಯಕರ ಹಣೆಬರಹ ತೀರ್ಮಾನಿಸುವವರು ಪ್ರಜೆಗಳು. ಕಾಂಗ್ರೆಸ್ ನ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ಮತ್ತು ಚಂದ್ರಬಾಬು ನಾಯ್ಡುರಂಥವರ ಒತ್ತಾಯದ ಮೇರೆಗೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಸಂಸತ್ತಿನಲ್ಲಿ ಹಿರಿಯ ರಾಜಕಾರಣಿಗಳು ಇರಬೇಕು ಎಂದು ನನ್ನನ್ನು ಸ್ಪರ್ಧಿಸುವಂತೆ ಅವರೆಲ್ಲ ಒತ್ತಾಯಿಸಿದರು. ರಾಜಕೀಯದಲ್ಲಿ ಹಿರಿಯ ನಾಯಕರ ಕೆಲಸಗಳು ಲೋಕಸಭೆಯ ಒಳಗೆ ಇರಬೇಕೆ ಹೊರತು ಹೊರಗಲ್ಲ ಎಂದು ಅವರೆಲ್ಲ ಒತ್ತಾಯಿಸಿದರು ಎಂದು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ. ಮೂರೂವರೆ ವರ್ಷಗಳ ಹಿಂದೆಯೇ ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕಣಕ್ಕಿಳಿಸುವುದು ಎಂದು ತೀರ್ಮಾನಿಸಲಾಗಿತ್ತು. ಹೀಗಾಗಿ ನಾನು ತುಮಕೂರಿಗೆ ಹೋದೆ.
ನೀವು ಮತ್ತು ನಿಮ್ಮ ಇಬ್ಬರು ಮೊಮ್ಮಕ್ಕಳು ಬೇರೆ ಬೇರೆ ಕ್ಷೇತ್ರಗಳಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಒಂದೇ ಕುಟುಂಬದ ಮೂವರನ್ನು ಜನರು ಸ್ವೀಕರಿಸಿ ಮತ ಹಾಕಿ ಸಂಸತ್ತಿಗೆ ಕಳುಹಿಸುತ್ತಾರೆ ಎಂಬ ಭಾವನೆ ನಿಮಗಿದೆಯೇ?
ಇದಕ್ಕೆ ವಿರೋಧವಿದ್ದರೂ ಯಾರೂ ಇದುವರೆಗೆ ಪ್ರಶ್ನೆ ಮಾಡಿಲ್ಲ. ಇದೊಂದು ಮುಖ್ಯ ವಿಷಯವೇ ಅಲ್ಲ. ತಂದೆ, ತಾಯಿ, ಗಂಡ, ಹೆಂಡತಿ, ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಮಾನ್ಯ ವಿಷಯ. ಇಂದು ಜನ ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತಾರೆ. ರೈತಪರ, ಬಡವರ ಪರ ಕಾಳಜಿಯಿರುವವರನ್ನು ಆರಿಸಿ ಕಳುಹಿಸಲು ನೋಡುತ್ತಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ತಾಲ್ಲೂಕುಗಳಿಗೆ ಹೋದಾಗ ಜನರು ನನಗೆ ತುಂಬು ಮನಸ್ಸಿನ ಸ್ವಾಗತ ನೀಡಿದ್ದಾರೆ.
ತುಮಕೂರು, ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ನಿಮಗೆ ಬಿಜೆಪಿಯಿಂದ ಮಾತ್ರವಲ್ಲದೆ ಕಾಂಗ್ರೆಸ್ ನಿಂದಲೂ ವಿರೋಧವಿದೆ. ಕೆಲವು ಕಾಂಗ್ರೆಸ್ ನಾಯಕರು ತಳ ಮಟ್ಟದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇವುಗಳನ್ನೆಲ್ಲ ಹೇಗೆ ನಿಭಾಯಿಸುತ್ತೀರಿ?
ತುಮಕೂರು ಅಥವಾ ಬೇರೆ ಕ್ಷೇತ್ರಗಳಲ್ಲಿ ಜನಸಾಮಾನ್ಯರ ಸಿಟ್ಟು ಇನ್ನೂ ನನಗೆ ಕಂಡುಬಂದಿಲ್ಲ. ಕೆಲವು ಜನರು ನನ್ನನ್ನು ಮತ್ತು ಪುತ್ರ ರೇವಣ್ಣನನ್ನು ಹಾಸನದ ಹೇಮಾವತಿ ಜಲಾಶಯದಿಂದ ತುಮಕೂರಿನ ಒಣ ಪ್ರದೇಶಗಳಿಗೆ ನೀರು ಒದಗಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಇದು ಹೊಸ ವಿಷಯವಲ್ಲ. ವಿರೋಧ ಪಕ್ಷದ ಕೆಲವು ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಪದೇ ಪದೇ ಹೇಳುತ್ತಾ ಬಂದಿದ್ದಾರೆ. ನೀವು ಮಾಧ್ಯಮದವರು ಇವಕ್ಕೆಲ್ಲಾ ಪ್ರಾಮುಖ್ಯತೆ ನೀಡಬಾರದು. ರಾಜಕಾರಣಿಯಾಗಿ, ಟೀಕೆ, ಟಿಪ್ಪಣಿ, ಹೊಗಳಿಕೆಗಳೆಲ್ಲವನ್ನೂ ಸ್ವೀಕರಿಸಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯವಿದೆ. ಅದು ಮುಂದಿನ ದಿನಗಳಲ್ಲಿ ಶಮನವಾಗಲಿದೆ.
ದೇಶದ ಹಿತಾಸಕ್ತಿ ವಿಚಾರದಲ್ಲಿ ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನಿಮಗೆ ಅನಿಸುತ್ತದೆ?
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಹಂಕಾರವನ್ನು ಬದಿಗೊತ್ತಿ ಎಲ್ಲ ಸಾಧನೆಗಳು ತನ್ನಿಂದಲೇ ಆಯಿತು ಎಂದು ಹೇಳುವುದನ್ನು ನಿಲ್ಲಿಸಬೇಕು. ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರಿಂದ ಹಿಡಿದು ಅವರ ಕುಟುಂಬದವರನ್ನು ಮೋದಿಯವರು ಟೀಕಿಸುತ್ತಲೇ ಬಂದಿದ್ದಾರೆ. ಜಮ್ಮು-ಕಾಶ್ಮೀರ ವಿವಾದ, ಪ್ರಮುಖ ಹಗರಣಗಳಿಗೆಲ್ಲ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ, ಸರ್ಕಾರದ ಮುಖ್ಯಸ್ಥ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಜನರ ಬೆಂಬಲ ಪಡೆದು ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಮುಂದುವರಿಯಬೇಕು.
ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ನಿಮ್ಮ ಪುತ್ರ ನಡೆಸಿಕೊಂಡು ಹೋಗುತ್ತಿರುವ ಮೈತ್ರಿ ಸರ್ಕಾರದ ಬಗ್ಗೆ ಏನು ಹೇಳುತ್ತೀರಿ?
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರು ಒಟ್ಟಾಗಿ ಕೆಲಸ ಮಾಡುತ್ತಿದ್ದು ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಬಿಜೆಪಿಯ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಲು ಕಾಂಗ್ರೆಸ್-ಜೆಡಿಎಸ್ ಪ್ರಯತ್ನಿಸುತ್ತಿವೆ. ಅದರಲ್ಲಿ ನಾವು ಸಫಲರಾಗುತ್ತೇವೆ ಎನ್ನುವ ವಿಶ್ವಾಸವಿದೆ. ದಕ್ಷಿಣದಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮುಖ್ಯ ಗುರಿ.
ನೀವು 24*7 ರಾಜಕಾರಣಿ ಎಂದು ಜನ ಹೇಳುತ್ತಾರೆ, ದೇವರು, ಜ್ಯೋತಿಷ್ಯ ಇತ್ಯಾದಿಗಳಲ್ಲಿ ನಂಬಿಕೆ ಹೆಚ್ಚು, ಇದರ ಬಗ್ಗೆ ಏನು ಹೇಳುತ್ತೀರಿ?
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ